Sunday 16 July 2017

ಪೊಲೀಸ್ ಇಲಾಖೆಯಲ್ಲೊಂದು ರಿಯಲ್ ಸಿಂಗಂ

ವಳಾಲು.. ಅಷ್ಟೇನು ಪರಿಚಿತವಲ್ಲದ ಊರು.. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 78 ರ ಹಾದಿಯಲ್ಲಿ ನೆಲೆಗೊಂಡಿರುವ ಊರು. ಲಕ್ಷಾಂತರ ಮಂದಿಯ ಜೀವನಾಡಿಯಾಗಿರುವ ನೇತ್ರಾವತಿ ನದಿ ದಂಡೆಗೆ ತಾಗಿಕೊಂಡಿರುವ ವಳಾಲೆಂಬ ಊರಿನಲ್ಲಿ ಬಡವರೇ ಹೆಚ್ಚು. ಇಲ್ಲಿನ ಜನರು ನಿತ್ಯ ಕಾಯಕದಲ್ಲಿ ತೊಡಗಿ ಜೀವನದ ಬಂಡಿ ಓಡಿಸುವವರು. ಈ ಊರಿನ ಮಧ್ಯಮ ವರ್ಗದ ಕುಟುಂಬದ ಯುವಕನೇ ಸಲೀಂ ಅಬ್ಬಾಸ್. ಸದ್ಯ ತನ್ನ ಪ್ರಾಮಾಣಿಕ ಮತ್ತು ನಿಷ್ಠಾವಂತ ಸೇವೆಯಿಂದ ಸಲೀಂ ಅಬ್ಬಾಸ್ ಹೆಸರು ಪೊಲೀಸ್ ಇಲಾಖೆಯಲ್ಲಿ ಚಿರಪರಿಚಿತ..
ಕರ್ನಾಟಕ ಸರ್ಕಾರದ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರಾಗಿ ಚಿಕ್ಕಮಗಳೂರಿನ ನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಲೀಂ ಅಬ್ಬಾಸ್ ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾ ಅಪರಾಧ ದಾಖಲೆ ಬ್ಯೂರೋ ( DCRB ) ಪೊಲೀಸ್ ಇನ್ಸ್ಪೆಕ್ಟರಾಗಿ ಬಡ್ತಿ ಹೊಂದಿದ್ದಾರೆ. ಯಾವುದೇ ಗಾಡ್ ಫಾದರ್ ಗಳಿಲ್ಲದೆ ತನ್ನ ಸ್ವಂತ ಪರಿಶ್ರಮದಿಂದ ಉನ್ನತಿ ಕಂಡ ಯುವಕ ಸಲೀಂ ಅಬ್ಬಾಸ್.


ಸಲೀಂ ಅಬ್ಬಾಸ್ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ವಳಾಲಿನ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷರಾಗಿ ಸುದೀರ್ಘ 11ವರ್ಷ ಸೇವೆ ಸಲ್ಲಿಸಿ, ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದ ಎಂ.ಪಿ ಅಬ್ಬಾಸ್ ಹಾಜಿಯವರ ಐದು ಗಂಡು ಮಕ್ಕಳಲ್ಲಿ ಎರಡನೆಯವರು. ಸಲೀಂ ಹುಟ್ಟಿದ್ದು ಉಪ್ಪಿನಂಗಡಿಯಲ್ಲಿ. ಹೆಚ್ಚು ವಿದ್ಯಾಭ್ಯಾಸ ಮಾಡಿದ್ದು ಕೂಡ ಉಪ್ಪಿನಂಗಡಿಯಲ್ಲೇ. ಅಂಗನವಾಡಿಯಿಂದ ಹಿಡಿದು ಬಿ.ಎ ಪದವಿ ತನಕ ಓದಿದ್ದು ಉಪ್ಪಿನಂಗಡಿಯಲ್ಲಿ. ಆದರೆ ಹೆಚ್ಚು ಓಡಾಡಿದ್ದು ವಳಾಲಿನಲ್ಲಿ. ಬೆಳೆದದ್ದು ಹಾಗೂ ಬೆಳವಣಿಗೆ ಕಂಡಿದ್ದು ಕೂಡ ವಳಾಲೆಂಬ ಊರಿನಲ್ಲಿ. ಸಲೀಂ ಅಬ್ಬಾಸ್ ಬಾಲ್ಯದ ಸಮಯದಲ್ಲಿ ಕುಟುಂಬ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿತ್ತು. ಸಲೀಂ ಸಂಕಷ್ಟದ ನಡುವೆಯೂ ಅರಳಿದ ಹೂವೆಂದೂ ತಾಯಿ ಝೋಹರಾ ಅಬ್ಬಾಸ್ ವಿವರಿಸುತ್ತಾರೆ.

ಸಲೀಂ ಬಾಲ್ಯ ಹಾಗೂ ಯವ್ವನದಲ್ಲಿ ಪೋಕಿರಿ, ಆದರೆ ಬುದ್ಧಿವಂತ. ಬಲು ಚೂಟಿ ವಿದ್ಯಾರ್ಥಿ. ಪ್ರಾಥಮಿಕ ಶಾಲೆಯಿಂದ ಹಿಡಿದು ಕಾನೂನು ಪದವಿ ತನಕ ಕೊನೆ ಬೆಂಚಿನ ಬುದ್ಧಿವಂತ ವಿದ್ಯಾರ್ಥಿ ಎಂಬುದು ಆಪ್ತ ಸ್ನೇಹಿತರ ಮಾತು. ಶಾಲಾ ಹಾಗೂ ಕಾಲೇಜು ಜೀವನದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಲೀಂ ಸದಾ ಮುಂದಿದ್ದರು. ಪದವಿ ಹಾಗೂ ಕಾನೂನು ಪದವಿಯನ್ನು ಸಲೀಂ ಪೂರ್ತಿಗೊಳಿಸಿದ್ದು ಉನ್ನತ ಶ್ರೇಣಿಯಲ್ಲಿ. ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಸಲೀಂ ರಾಂಕ್ ವಿದ್ಯಾರ್ಥಿ ಹಾಗೂ ಕಾಲೇಜಿನಲ್ಲಿಯೇ ದ್ವಿತೀಯ ಸ್ಥಾನವನ್ನು ಪಡೆದಿದ್ದರು. ಎರಡು ವಿಷಯಗಳಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಹಾಗೂ ನಗದು ಪುರಸ್ಕಾರವನ್ನು ತನ್ನದಾಗಿಸಿಕೊಂಡಿದ್ದಾರೆ . ಕರ್ನಾಟಕ ಪೊಲೀಸ್ ಇಲಾಖೆ ನಡೆಸಿದ PSI ಪರೀಕ್ಷೆಯಲ್ಲಿ merit ನಲ್ಲಿ ಉತ್ತೀರ್ಣರಾಗಿದ್ದರು.

       ಶಾಲಾ- ಕಾಲೇಜು ವ್ಯಾಸಂಗದ ಅವಧಿಯಲ್ಲಿ ಸಲೀಂ ಕಷ್ಟಗಳನ್ನು ಎದುರಿಸಿದ ವಿದ್ಯಾರ್ಥಿ. ಆರ್ಥಿಕ ಸಂಕಷ್ಟಗಳ ನಡುವೆ ವ್ಯಾಸಂಗವನ್ನು ಮಾಡಿದ್ದ ಸಲೀಂ ಕನಸುಗಾರ. ಮುಂದೆ ಏನಾದರೂ ಸಾಧಿಸಬೇಕೆಂದು ವಿದ್ಯಾಭ್ಯಾಸದಲ್ಲಿ ತೊಡಗಿದ್ದ ಛಲವಾದಿಯೂ ಹೌದು.
ಸಲೀಂ ಅಬ್ಬಾಸ್ ಕನಸಿಗೆ ಸಾಥ್ ನೀಡಿದವರು ತಂದೆ ಎಂ.ಪಿ ಅಬ್ಬಾಸ್ ಹಾಜಿ. ಎರಡನೇ ಪುತ್ರ ಸಲೀಂ ತಂದೆಯ ಪ್ರೀತಿಪಾತ್ರ ಮಗ. ಅಪ್ಪನ ಬಾಯಿಂದ ಹೆಚ್ಚು ಬೈಗುಳ ತಿಂದಿದ್ದು ಹಾಗೂ ಕೈಯಿಂದ ಹೆಚ್ಚು ಏಟು ತಿಂದ ಮಗ ಕೂಡ ಸಲೀಮನೇ ಎಂದೂ ಇವರ ಇತರ ಸಹೋದರರು ಹೇಳುವ ಮಾತು. ಇಂದು ಖಾಕಿ ಧರಿಸಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿರಲು ಕಾರಣ ಇವರ ತಂದೆಯವರಾದ ಅಬ್ಬಾಸ್ ಹಾಜಿಯವರೇ ಮುಖ್ಯ ಕಾರಣ ಎಂದು ಸ್ವತಃ ಸಲೀಂ ತನ್ನೆಲ್ಲಾ ಹೇಳಿಕೆಯಲ್ಲಿ ಹೇಳುವ ವಿಚಾರ.

ಎಲ್ಲರಂತೆ ಒಂದು ಕಾಲಕ್ಕೆ ಪೋಕಿರಿಯಾಗಿದ್ದ ಸಲೀಂ ಅಬ್ಬಾಸ್ , ಸದ್ಯ ಪಳಗಿದ ಪೊಲೀಸ್ ಅಧಿಕಾರಿ. ಕರ್ನಾಟಕ ಪೊಲೀಸ್ ಇಲಾಖೆಗೆ ಸೇರಿ ಒಂದು ದಶಕ ಕಳೆದಿದೆ. ಪೊಲೀಸ್ ಸೇವೆಯ ಹತ್ತು ವರ್ಷದ ಅವಧಿಯಲ್ಲಿ ಇಲಾಖೆಯಲ್ಲಿ ಮಾಡಿರುವ ಸಾಧನೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ.
ಅಂಕೋಲದ ಉದ್ಯಮಿ ಆರ್.ಎನ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಚ್ಚಿದ ಕಾರಣಕ್ಕಾಗಿ ಇಲಾಖೆಯಿಂದ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ಸ್ವೀಕರಿದ್ದಾರೆ. 2015 ರಲ್ಲಿ ರಂಝಾನ್ ಹಬ್ಬದ ಸಂದರ್ಭದಲ್ಲಿ ದುಷ್ಕರ್ಮಿಗಳು ಉಪ್ಪಳ್ಳಿ ಪಾಂಚ್ ಪೀರ್ ದರ್ಗಾಕ್ಕೆ ಹಂದಿ ಮಾಂಸ ಹಾಕಿದ್ದ ಪ್ರಕರಣದಲ್ಲಿ ಚಿಕ್ಕಮಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಇಲಾಖೆಯಿಂದ ನಗದು ಪುರಸ್ಕಾರ. ಚಿಕ್ಕಮಗಳೂರು ನಗರ ಮತ್ತು ಆಲ್ದೂರಿನಂತ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ತಮ್ಮ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಎಲ್ಲರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಹಾಗೂ ಇನ್ನೂ ಅನೇಕ ಕ್ಲಿಷ್ಟ ಪ್ರಕರಣ ಮತ್ತು ಹಲವು ಸುಲಿಗೆ, ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ನಿಷ್ಠಾವಂತತೆಯಿಂದ ಶಿರಸಿ, ಆಲ್ದೂರು, ಚಿಕ್ಕಮಗಳೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ವಳಾಲೆಂಬ ಸಣ್ಣ ಊರು ಇವತ್ತು ಸಲೀಂ ಅಬ್ಬಾಸ್ ಹೆಸರಲ್ಲಿ ಅಭಿಮಾನ ಪಡುತ್ತಿದೆ. ನಮ್ಮೂರಿನ ಯುವಕ ಪೊಲೀಸ್ ಅಧಿಕಾರಿ ಎಂದು ಹೆಮ್ಮೆಯಿಂದ ಬೀಗುತ್ತಿದೆ.
ಸಲೀಂ ಅಬ್ಬಾಸ್ ರವರ ಹೆಗಲಿಗೆ ಇನ್ನಷ್ಟು ನಕ್ಷತ್ರಗಳು ಕೂಡಿ ಬರಲಿ, ತನ್ನ ಪ್ರಾಮಾಣಿಕ ಸೇವೆಯು ಸದಾ ಮುಂದುವರಿಯುತ್ತಿರಲಿ ಹಾಗೂ ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಶುಭ ಹಾರೈಸುತ್ತಿದೆ.

No comments:

Post a Comment