Saturday 15 July 2017

ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ನಿಜವಾಗಿ ರಕ್ಷಣೆ ನೀಡುತ್ತಿದೆಯಾ?

ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ಈ ಮುಂದೆ ಹಲವಾರು ಕೋಮು ವಿಷಬೀಜ ಬಿತ್ತಿ ಮತ್ತು ಅದರಿಂದ ಪ್ರಚೋದಿತಗೊಂಡ ಸಂಘಪರಿವಾರದ ಕಾರ್ಯಕರ್ತರು ಮಸೀದಿಗೆ, ಮುಸಲ್ಮಾನರ ಮನೆಗಳಿಗೆ, ಅಂಗಡಿಗಳಿಗೆ ಕಲ್ಲು ತೂರಾಟ ನಡೆಸಿ ಗಲಭೆಗಳನ್ನು ಸೃಷ್ಠಿಸಿದಾಗಲೆಲ್ಲಾ ಬಂಧನಕ್ಕೊಳಗಾಗುತ್ತಿದ್ದವರು ಮತ್ತು ಸದ್ಯ ಕಲ್ಲಡ್ಕದಲ್ಲಿ ನಡೆಯುತ್ತಿರುವ ಘಟನೆಗಳೆಲ್ಲಾ ಬಂಧನಕ್ಕೊಳಪಡುತ್ತಿರುವವರು ಶಾಂತಿ ಸಹನೆಯೆಂದು ತನ್ನ ಧರ್ಮ ಕಲಿಸಿದ್ದನು ಪಾಲಿಸುತ್ತಿರುವ ಮುಸಲ್ಮಾನರು.. ರಮದಾನ್ ಪ್ರಾರಂಭದಲ್ಲೂ, ನಡುವಿನಲ್ಲೂ ನಡೆದ ಘಟನೆಯಲ್ಲಿ ಇದೇ ಪುನಾರಾವರ್ತನೆಗೊಂಡಿದೆ.


'ಅಲ್ಪಸಂಖ್ಯಾತರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ'ವೆಂದು ಚುನಾವಣಾ ಪ್ರಚಾರದಲ್ಲಿ ಉದ್ದುದ್ದದ ಭಾಷಣ ಮಾಡಿ ಅಲ್ಪಸಂಖ್ಯಾತರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದ ಬೊಗಳೆ ರಾಜಕಾರಣಿಗಳು ನಿರಂತವಾಗಿ ಅದೇ ಅಲ್ಪಸಂಖ್ಯಾತರ ಹತ್ಯೆ ಅವರ ಮೇಲೆ ಹಲ್ಲೆ ,ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದರೂ ಬೊಗಳೆ ಜನಪ್ರತಿನಿಧಿಗಳು ಮಾತ್ರ ಪತ್ರಿಕಾ ಹೇಳಿಕೆಯಲ್ಲಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ರಕ್ಷಣೆಯನ್ನು ಮಾಡ ಹೋರಟಿರುವುದು ಜಿಲ್ಲೆಯಲ್ಲಿ ಇನ್ನಷ್ಟು ಘಟನೆಗಳು ಹೆಚ್ಚಾಗಲು ಪ್ರಮುಖ ಕಾರಣ.

ಕೋಮು ವೈಷಮ್ಯವನ್ನು ಸೃಷ್ಠಿಸುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡಿರುತ್ತಿದ್ದರೆ ಸಂಘಪರಿವಾರದ ವ್ಯವಸ್ಥಿತ ರಾಜಕೀಯ ಸಂಚಿಗೆ ಮುಸಲ್ಮಾನೆಂದು ಅಂದಾಜಿಸಿ ಹತ್ಯೆಗೈಯ್ಯಲ್ಪಟ್ಟ ಬಿಸಿರೋಡಿನ ಹರೀಶ್, ಗೋ ರಾಜಕೀಯಕ್ಕೆ ಬಲಿಯಾದ ಬಿಜೆಪಿ ಕಾರ್ಯಕರ್ತ ಕುಂದಾಪುರದ ಪ್ರವೀಣ್, ಜನಪ್ರತಿನಿಧಿಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದ ಜನನಾಯಕನಾಗಿದ್ದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ, ಮೈಸೂರಿನ ಕಾರಾಗ್ರಹದಲ್ಲಿ ಬಿಡುಗಡೆಯಾಗುವ ಕೆಲವೇ ಗಂಟೆಗಳ ಮೊದಲು ನಿರಪರಾಧಿ ಮುಸ್ತಫಾ ಕಾವೂರು, ಮಂಗಳೂರು ಕಾರಾಗೃಹದಲ್ಲಿ ಯೂಸುಫ್ ಮಾಡುರು, ಮಂಗಳೂರಿನ ಹೃದಯ ಭಾಗದಲ್ಲಿ ನಗ್ನತೆಯಲ್ಲಿ ದೌರ್ಜನ್ಯಕ್ಕೊಳಗಾದ ಯುವಕ, ರಾಜ್ಯದ ಪ್ರಗತಿಪರರ ಹತ್ಯೆ ಮತ್ತು ಅವರ ಮೇಲೆ ನಡೆದ ಹಲ್ಲೆ ಮತ್ತು ಮಸಿ ಎರಚಾಟ , ಗೋಮಾಂಸದ ಹೆಸರಲ್ಲಿ ಕೋಮಾಸ್ಥಿತಿಯಲ್ಲಿ ನರಳುತ್ತಿರುವ ಯುವಕರು, ನೆರೆ ರಾಜ್ಯದ ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದಾಗ ಮಾಡಿದ ಕ್ರೌರ್ಯತೆ, ಚಿತ್ರನಟಿಯ ಮೇಲೆ ಮೊಟ್ಟೆ ಎಸೆತ, ವಿವಿಧ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಗಂಭೀರವಾಗಿ ನಡೆದ ಹಲ್ಲೆಗಳು ಹಾಗೂ ಜೀವನದ ಅಂತಿಮ ಕ್ಷಣಗಳವರೆಗೆ ಸಮಾಜದ ಹಿತಕ್ಕಾಗಿ ಜೀವನ ಮುಡಿಪಾಗಿಟ್ಟು ಸಂಘಪರಿವಾರದ ದುಷ್ಕರ್ಮಿಗಳಿಂದ ಅಮಾನವೀಯವಾಗಿ ಹತ್ಯೆಗೊಳಗಾದ ಅಶ್ರಫ್ ಕಲಾಯಿಯು ಹತ್ಯೆಗೊಳಗಾಗುತ್ತಿರಲಿಲ್ಲ. ಈ ಎಲ್ಲಾ ಸಂದರ್ಭದಲ್ಲಿ ಮಾಧ್ಯಮವು ತನ್ನದೇ ಶೈಲಿಯಲ್ಲಿ ಹತ್ಯೆಯಲ್ಲೂ, ದೌರ್ಜನ್ಯದಲ್ಲೂ ಪಾಲುಗಾರಿಕೆ ಪಡೆದುಕೊಂಡಿರುವುದು ವಿಶೇಷತೆ. ಅಲ್ಪಸಂಖ್ಯಾತರ ಹತ್ಯೆ, ಅವರ ಮೇಲೆ ಹಲ್ಲೆ ದೌರ್ಜನ್ಯಗಳು ನಡೆದಾಗ ಕುರುಡರಂತೆ ವರ್ತಿಸಿ ಸಂಘಪರಿವಾರದ ದ್ವೇಷ ರಾಜಕಾರಣಕ್ಕೆ ಅಲ್ಪಸಂಖ್ಯಾತರಿಗೆ ಚಳ್ಳೆ ಹಣ್ಣು ತಿನ್ನಿಸುವುದರ ಮೂಲಕ ಇನ್ನಷ್ಟು ಘಟನೆಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿತ್ತು. ಪೂರಕವೆಂಬಂತೆ ಇಂದು ನಡೆದ ಹತ್ಯೆಯಲ್ಲೂ ಇದು ಪುನರಾವರ್ತನೆಗೊಂಡಿದೆ. ‘ರೌಡಿ ಶೀಟರ್ ಹತ್ಯೆ’ಯೆಂದು ತಲೆಬರಹ ನೀಡಿ ಘಟನೆಯ ಹಾದಿ ತಪ್ಪಿಸಿ ಘಟನೆಯ ನ್ಯಾಯ ಮರೀಚಿಕೆಗೆ ಪ್ರಥಮ ಬೆದರಿಕೆಯೊಡ್ಡಿದ ಚಾಣಾಕ್ಷಣತೆ ಇದು. ಈ ಘಟನೆಯಲ್ಲಿ ಹತ್ಯೆ ಆರೋಪಿಗಳಷ್ಟೇ ಆರೋಪಿ ಸ್ಥಾನದಲ್ಲಿ ಕಾಣಬೇಕಾಗಿರುವುದು ರೌಡಿ ಶಿಟರ್ ಎಂಬ ತಲೆ ಬರಹ ನೀಡಿ ಘಟನೆಯ ದಾರಿ ತಪ್ಪಿಸಲು ನಡೆಸಿದ ಮಾಧ್ಯಮವನ್ನು. ಈ ಎಲ್ಲಾ ಘಟನೆಗಳ ಹಿಂದೆ ಬಿಜೆಪಿ ಯೆಂಬ ಜನವಿರೋಧಿ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೇಲೆತ್ತುವ ಕೆಲಸವಾಗಿದೆ ಎಂಬುವುದು ಸಾಬೀತಾಗುತ್ತಿದೆ.

ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಕಾರ್ಯ ನಿರ್ವಹಣೆಯು ಅತ್ಯಂತ ಆತಂಕಕಾರಿಯಾಗಿ ಪರಿಣಮಿಸುತ್ತಿದೆ. ಕೋಬ್ರಾ ಪೋಸ್ಟ್ ಅಕ್ಷರಶಃ ಸತ್ಯವಾಗಿ ಗೋಚರಿಸ ತೊಡಗಿದೆ. ದಕ್ಷ ಅಧಿಕಾರಿಗಳನ್ನು ವರ್ಗಾಯಿಸಲಾಗುತ್ತಿದೆ. ನ್ಯಾಯಕ್ಕಾಗಿ ಪ್ರತಿಭಟಿಸಿದವರ ವಿರುದ್ಧವೇ ಲಾಠಿ ಚಾರ್ಜ್ ನಡೆಸಲಾಗುತ್ತೆ ಮತ್ತು ಬಂಧನಕ್ಕೊಳಪಡಿಸಲಾಗುತ್ತಿದೆ. ಪ್ರತಿಭಟನೆಯ ಹಕ್ಕನ್ನು ಕಸಿಯಲಾಗುತ್ತಿದೆ, ಕೇಸು ದಾಖಲಿಸಲು ಪೊಲೀಸ್ ಮೆಟ್ಟಿಲೇರಿದವರ ವಿರುದ್ಧವೇ ಕೇಸು ಜಡಿಯಲಾಗುತ್ತಿದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ತಡೆಯೊಡ್ಡಲಾಗುತ್ತಿದೆ ಮತ್ತು ಕೋಮುವೈಷ್ಯಮ್ಯ ಬಿತ್ತುವ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಿಲ್ಲದೆ ಪರವಾನಿಗೆ ನೀಡಿ ಕೋಮು ಗಲಭೆಗೆ ಸಹಕಾರ ನೀಡುತ್ತಿದೆಯಾ ಎಂಬ ದಟ್ಟವಾದ ಸಂಶಯ ಜನಸಾಮಾನ್ಯರಲ್ಲಿ ಎಡೆಮಾಡಿಕೊಡುತ್ತಿದೆ. ಅಮಾಯಕರನ್ನು ಬಂಧಿಸಿ ಹಿಂಸಿಸಲಾಗುತ್ತಿದೆ. ಮನೆ ಮನೆಗಳಿಗೆ ನುಗ್ಗಿ ಮಹಿಳೆಯರನ್ನದೇ ದೌರ್ಜನ್ಯವೆಸಗಲಾಗುತ್ತಿದೆ. ನ್ಯಾಯಾಲಯಗಳಿಗೆ ಸುಳ್ಳು ವರದಿಯನ್ನೇ ಒಪ್ಪಿಸಿ ಸತ್ಯವೆಂದು ನಂಬಿಸಲಾಗುತ್ತಿದೆ. ದಕ್ಷ ಅಧಿಕಾರಿಗಳ ಕೈ, ಬಾಯಿಯನ್ನು ಕಟ್ಟಿಹಾಕಲಾಗುತ್ತಿದೆ. ಹೀಗೆ ಪೊಲೀಸ್ ಇಲಾಖೆಯಲ್ಲೂ ಸಂಘಪರಿವಾರದ ಕ್ರೌರ್ಯತೆ ಹೆಚ್ಚಾಗುತ್ತಿದೆ. ಸಂಘಪರಿವಾರದೊಂದಿಗೆ ಜೊತೆಗೂಡಿ ತನ್ನದೇ ಸಹೋದರಿ ಹಾಗೂ ಆಕೆಯ ಪ್ರಿಯತಮನ ಕೈಯ್ಯಿಂದ ಹತ್ಯೆಯಾದ ಕಾರ್ತಿಕ್ ರಾಜ್ ಪ್ರಕರಣದಲ್ಲಿ ಪೊಲೀಸರಿಂದ ದೌರ್ಜನ್ಯ ಸಹಿಸಿದ ಮತ್ತು ಬಂಧನಕ್ಕೊಳಗಾದ ಮುಸಲ್ಮಾನ ಯುವಕರೆಷ್ಟು. ಇದೇ ಕಾರ್ತಿಕ್ ರಾಜ್ ಹತ್ಯೆಯ ವಿರುದ್ಧ ಸಂಘಪರಿವಾರ ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲೆಗೆ ಬೆಂಕಿ ಇಡಲು ತಯಾರಿದ್ದೇವೆ ಎಂದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾಗುವುದಿಲ್ಲವೆಂದಾದರೆ? ಕಲ್ಲು ತೂರಾಟದ ಸಂದರ್ಭ ಪೊಲೀಸ್ ಮದ್ಯದಲ್ಲಿ ನಿಂತು ಮೂಕಪ್ರೇಕ್ಷಕರಾಗುತ್ತಾರೆ ಎಂದರೆ? ರಕ್ಷಣೆ ಕೊಡಬೇಕಾದವರು ಯಾರು? ರಕ್ಷಕರೇ ರಾಕ್ಷಸರಾದರೇ ರಕ್ಷಣೆಗಾಗಿ ಈ ಸಮುದಾಯ ಯಾರನ್ನು ನಂಬಬೇಕು? ಅಲ್ಪಸಂಖ್ಯಾತರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯವೆಂದರು ಎಲ್ಲಿದ್ದಾರೆ? ಇದ್ಯಾವುದರ ಬಗ್ಗೆಯೂ ವಿಧಾನ ಸಭೆಯೊಳಗಡೆ ಚರ್ಚೆ ನಡೆಯುವುದಿಲ್ಲವೆಂದರೆ? ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಮರೀಚಿಕೆಯಾಗಿಯೇ ಉಳಿಯಲಿದೆ.

ಸರಕಾರ ದಕ್ಷಿಣ ಕನ್ನಡದಲ್ಲಿ ನಡೆದಿರುವ ಎಲ್ಲಾ ಘಟನೆಗಳನ್ನು ಪುನರ್ ಪರಿಶೀಲಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಜಾಮೀನು ರಹಿತ ಕೇಸು ದಾಖಲಿಸಿ ಅವರನ್ನು ಕಾನೂನಿನ ಹದ್ದುಬಸ್ತಿನಲ್ಲಿಡಲಿ.

ಸಹೋದರ ಅಶ್ರಫ್ ರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ, ಸಹನೆ ಯನ್ನು ಜಗದೊಡೆಯನು ಕುಟುಂಬಿಕರೊಂದಿಗೆ ನಮಗೂ ನೀಡಲಿ. ಅಮೀನ್
ಕೋಮುವಾದಿಗಳ ಹಿಡನ್ ಅಜೆಂಡಾಕ್ಕೆ ಜೀವನವನ್ನೇ ತ್ಯಾಗ ಮಾಡಿದ ಸಹೋದರರೇ, ಸಾವಿರಾರು ಹೃದಯಗಳಲ್ಲಿ ಭದ್ರವಾಗಿ ನೆಲೆನಿಂತಿದ್ದೀರಿ.
-ರಿಲ್ವಾನ್ ಹುಸೈನ್ ವಳಾಲ್

No comments:

Post a Comment